ನೀರು ನವಿಲು
	ಪೆಕಾನಿಫಾರ್‍ಮೀಸ್ ಗಣದ ಅನಿಂಗ್‍ಯಿಡೀ ಕುಟುಂಬಕ್ಕೆ ಸೇರಿದ ಜಲಪಕ್ಷಿ (ಡಾರ್ಟರ್ ಅಥವಾ ಅನಿಂಗ ಭಾರತದಲ್ಲಿ ಅನಿಂಗ ಪ್ರಭೇದ ಕಾಣಸಿಕ್ಕುತ್ತವೆ. ನದಿ ದಂಡೆಗಳ ಬಂಡೆಗಳ ಮೇಲೆ ಕುಳಿತು ರೆಕ್ಕೆಗಳನ್ನು ದೊಡ್ಡದಾಗಿ ಬಿಡಿಸಿ ಪುಕ್ಕಗಳು ಎದ್ದು ಕಾಣುವಂತೆ ಹರಡುವುದರಿಂದ ಈ ಹಕ್ಕಿಗೆ ನೀರು ನವಿಲು ಎಂದು ಹೆಸರು ಕೊಡಲಾಗಿದೆ. ಇದಕ್ಕೆ ಸರ್ಪಪಕ್ಷಿ (ಸ್ನೇಕ್‍ಬರ್ಡ್) ಎಂಬ ಹೆಸರೂ ಇದೆ. ಇದರ ಕತ್ತು ಹಾವಿನ ತರಹ ದುಂಡಗೆ, ಉದ್ದವಾಗಿ ಇದ್ದು ಆಗಾಗ್ಗೆ ಮಣಿಯುವುದರಿಂದ ಈ ಹೆಸರು ಬಂದಿರಬೇಕು. ಉಷ್ಣ ಹಾಗೂ ಸಮಶೀತೋಷ್ಣ ವಲಯಗಳ ಎಲ್ಲ ದೇಶಗಳಲ್ಲೂ ನೀರು ನವಿಲು ಉಂಟು. ಇದಕ್ಕೂ ನೀರುಕಾಗೆಗೂ (ಕಾರ್ಮೊರಾಂಟ್) ಬಲು ಹತ್ತಿರ ಸಂಬಂಧ. ನೀರು ನವಿಲು ಹದ್ದಿನ ಗಾತ್ರದ ಪ್ರಾಣಿ. ಕತ್ತು ತುಂಬ ಉದ್ದವಾಗಿದ್ದು ಸುಲಭವಾಗಿ ಬಳಕುವಂತಿದೆ. ಕೊಕ್ಕು ಉದ್ದ; ಚೂಪಾದ ಚೂರಿಯಂತಿದೆ. ದೇಹದ ಬಣ್ಣ ಪ್ರಧಾನವಾಗಿ ಕಪ್ಪು. ತಲೆ ಮತ್ತು ಕತ್ತುಗಳು ಮಾತ್ರ ಕಂದು. ಬೆನ್ನಮೇಲೆ ಬೂದು ಬಣ್ಣದ ಮಚ್ಚೆಗಳುಂಟು. ಮೈಮುಚ್ಚುವ ಪುಕ್ಕಗಳು ದಟ್ಟವಾಗಿ ಜೋಡಣೆಗೊಂಡಿದೆ. ತೋಕೆ ಉದ್ದ.

	ಮೀನು ಇದರ ಪ್ರಧಾನ ಆಹಾರ. ಕಪ್ಪೆ, ಜಲಕೀಟಗಳು, ಸೀಗಡಿಗಳು ಮುಂತಾದವನ್ನೂ ತಿನ್ನದೇ ಇಲ್ಲ. ಇದು ಮೀನಿನ ಬೇಟೆಯಾಡುವ ವೈಖರಿ ನಿಜಕ್ಕೂ ಕುತೂಹಲಕಾರಿ. ಕತ್ತು ಮಾತ್ರ ನೀರಿನ ಮೇಲೆ ಕಾಣುವಂತೆ ಎತ್ತಿಕೊಂಡು ಈಜುತ್ತಿದ್ದು ಮೀನು ಕಂಡೊಡನೆ ನೀರಿನೊಳಗೆ ಪೂರ್ತಿ ಮುಳುಗಿ ಕತ್ತನ್ನು S ಆಕಾರದಲ್ಲಿ ಕೊಂಕಿಸಿಕೊಂಡು ತನ್ನ ಏಟಿಗೆ ಮೀನು ಸಿಗುವಷ್ಟು ಹತ್ತಿರಕ್ಕೆ ಸಾಗಿ ಅನಂತರ ಸ್ಟ್ರಿಂಗ್ ಸುರುಳಿಯಿಂದಲೆಂಬಂತೆ ತನ್ನ ಚೂಪಾದ ಕೊಕ್ಕಿನಿಂದ ಎದೆಯನ್ನು ತಿವಿದು ಚುಚ್ಚಿ ಎತ್ತಿಕೊಳ್ಳುತ್ತದೆ. ತರುವಾಯ ನೀರಿನಿಂದ ಮೇಲಕ್ಕೆ ಬಂದು ಮೀನನ್ನು ಗಾಳಿಗೆ ತೂರಿ ಕೊಕ್ಕನ್ನು ಅಗಲಿಸಿ ಕೆಳಗೆ ಬೀಳುವ ಮೀನನ್ನು ಹಿಡಿದು ನುಂಗುತ್ತದೆ.

	ನೀರುಕಾಗೆಗಳಂತೆಯೇ ನೀರುನವಿಲಿನಲ್ಲೂ ಚರ್ಮದಡಿ ಗಾಳಿ ಚೀಲಗಳಿಲ್ಲ. ಇವುಗಳ ಮೂಳೆಗಳು ಭಾರವಾಗಿಯೇ ಇವೆ. ಬೇಟೆಯಾಡಲೆಂದು ನೀರಲ್ಲಿ ಮುಳುಗಲು ಇದರಿಂದ ಅನುಕೂಲವಾಗಿದೆ. ನೀರುನವಿಲಿನ ಇನ್ನೊಂದು ವಿಚಿತ್ರ ಲಕ್ಷಣವೆಂದರೆ ವಯಸ್ಕ ಹಕ್ಕಿಗಳ ಹೊರನಾಸಿಕ ರಂಧ್ರಗಳು ಸಂಪೂರ್ಣವಾಗಿ ಮುಚ್ಚಿ ಹೋಗಿರುವುದು. ಇವುಗಳ ಜಠರದಲ್ಲಿ ರೋಮಾವೃತ ಅಸ್ತರಿ ಉಂಟು. ಇದರ ನಿರ್ದಿಷ್ಟ ಕಾಂiÀರ್iವೇನೆಂದು ಗೊತ್ತಿಲ್ಲ. ಆದರೆ ಮೀನುಗಳ ಮೂಳೆ ಚೂರುಗಳನ್ನು ಸೋಸಿ ಹೊರತೆಗೆಯಲು ಇದು ಸಹಾಯಕವೆಂದು ತಿಳಿಯಲಾಗಿದೆ.

	ನೀರುನವಿಲು ತುಂಬ ಚೆನ್ನಾಗಿ ಈಜಬಲ್ಲುದಷ್ಟೇ ಅಲ್ಲ ಅಷ್ಟೇ ಸೊಗಸಾಗಿ ಹಾರಲೂ ಬಲ್ಲುದು. ಗೂಡು ಕಟ್ಟುವಾಗ ಸಂಘಜೀವನವನ್ನು ಪ್ರದರ್ಶಿಸುತ್ತದೆ. ಹಲವಾರು ನೀರುನವಿಲುಗಳು ಒಂದೆಡೆ ಸೇರಿ ತಮ್ಮ ತಮ್ಮ ಗೂಡುಗಳನ್ನು ರಚಿಸಿಕೊಂಡು ಮೊಟ್ಟೆಯಿಡುವುವು. ಆ ಕಾಲದಲ್ಲಿ ನಾರಾಯಣಿ (ಹೆರಾನ್), ಬೂಸಾ (ಐಬಿಸ್) ಹಕ್ಕಿಗಳೊಡನೆ ಸೇರಿಕೊಳ್ಳುವುದೂ ಉಂಟು. ನದಿದಂಡೆಯ ಮೇಲಿರುವ ಗಿಡಮರಗಳ ರೆಂಬೆಗಳಲ್ಲಿ ಎಲೆ, ಕಡ್ಡಿಗಳನ್ನು ಸೇರಿಸಿ ಗೂಡನ್ನು ರಚಿಸುವುವು. ಮೊಟ್ಟೆಗಳ ಸಂಖ್ಯೆ ಮೂರರಿಂದ ನಾಲ್ಕು. ಇಪ್ಪತ್ತೈದರಿಂದ ಇಪ್ಪತ್ತೆಂಟು ದಿವಸಗಳ ಅನಂತರ ಮೊಟ್ಟೆಯೊಡೆದು ಮರಿಗಳು ಹೊರಬರುವುವು. ಗಂಡು ಹೆಣ್ಣುಗಳೆರಡೂ ಕಾವಿಗೆ ಕೂರುವದಲ್ಲದೆ ಮರಿಗಳ ಪಾಲನೆ ಮಾಡುವುವು. ಹುಟ್ಟಿದಾಗ ಮರಿಗಳ ಮೈಮೇಲೆ ಪುಕ್ಕಗಳೇ ಇರುವುದಿಲ್ಲ. ಅಲ್ಲದೆ ಕಣ್ಣೂ ತೆರೆದಿರುವುದಿಲ್ಲ. ಆದರೆ ಬಲುಬೇಗ ಇವಕ್ಕೆ ತುಪ್ಪಳಿನಂಥ ಬಿಳಿಯ ಪುಕ್ಕಗಳು ಬರುವುವು. ಸುಮಾರು ಏಳೆಂಟು ವಾರಗಳವರೆಗೆ ಗೂಡಿನಲ್ಲೇ ಇದ್ದು ಅನಂತರ ಸ್ವತಂತ್ರ ಜೀವನ ನಡೆಸಲು ಸಮರ್ಥವಾಗುತ್ತವೆ.
(ಎಂ.ಎನ್.ಎಚ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ